1.ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ
ಸರ್ಕಾರವು ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹವನ್ನು 2008 ರಲ್ಲಿ ಖ್ಯಾತ ವಿಜ್ಞಾನಿ ಭಾರತರತ್ನ ಪ್ರೊ. ಸಿ. ಎನ್. ಆರ್. ರಾವ್, ಎಫ್.ಆರ್.ಎಸ್., ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕರು ಹಾಗೂ ಗೌರವಾನ್ವಿತ ಅಧ್ಯಕ್ಷರು, ಜೆ.ಎನ್.ಸಿ.ಎಸ್.ಎ.ಆರ್., ರವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹವು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ದಾರ್ಶನಿಕ ಸಮೂಹದ ಯೋಜನೆಗಳ ಸಂಯೋಜನೆ ಹಾಗೂ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡುವ ರಾಜ್ಯದ ಸರ್ವೋನ್ನತ ಮಂಡಳಿಯಾಗಿ ಕಾರ್ಯನಿರ್ವಹಿಸುತ್ತಿದೆ.
ದಾರ್ಶನಿಕ ಸಮೂಹದ ಶಿಫಾರಸ್ಸಿನಂತೆ, ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಪ್ರಮುಖ ಯೋಜನೆಗಳು ಈ ಕೆಳಕಂಡಂತಿವೆ:
ಹೆಚ್ಚಿನ ಮಾಹಿತಿಗಾಗಿ : http://www.vgst.in/
ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳಲ್ಲಿ ಪಿಹೆಚ್.ಡಿ. ಸಂಶೋಧನೆಯನ್ನು ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2018-‘19ನೇ ಸಾಲಿನಿಂದ ಹೊಸ ಯೋಜನೆಯಾಗಿ “ವಿಜ್ಞಾನ ಮತ್ತು ಇಂಜಿನಿಯರಿಂಗ್‍ನ ಪಿಹೆಚ್.ಡಿ. ಸಂಶೋಧಕರಿಗೆ ಡಿ.ಎಸ್.ಟಿ. ಶಿಷ್ಯವೇತನ“ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಒಟ್ಟು 44 ವಿದ್ಯಾರ್ಥಿಗಳಿಗೆ ಮಾಸಿಕ ರೂ. 20,000.00 ಗಳಂತೆ ಶಿಷ್ಯವೇತನವನ್ನು ನೀಡಲು ಉದ್ದೇಶಿಸಿ, ಕರ್ನಾಟಕದಲ್ಲಿರುವ ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯ/ಸಂಸ್ಥೆ/ಕಾಲೇಜುಗಳಲ್ಲಿ ಈಗಾಗಲೇ ಪಿಹೆಚ್.ಡಿ. ಪದವಿಗೆ ನೋಂದಾಯಿತರಾಗಿರುವ ಅರ್ಹ ಸಂಶೋಧನಾ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2022-23 ನೇ ಸಾಲಿನಲ್ಲಿ DST-Ph.D. ಶಿಷ್ಯವೇತನ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ.
ರಾಜ್ಯದಲ್ಲಿನ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರತಿಭೆಗಳನ್ನು ಗುರುತಿಸಿ ಪುರಸ್ಕರಿಸುವ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ರಾಜ್ಯದ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಹಲವಾರು ಪ್ರಶಸ್ತಿಗಳನ್ನು ಸ್ಥಾಪಿಸಿದೆ. ಈ ಪ್ರಶಸ್ತಿಗಳನ್ನು 1996 ರಿಂದ ಪ್ರತಿ ವರ್ಷ ಪ್ರಖ್ಯಾತ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳಿಗೆ ಅವರ ಸಾಧನೆಗಳಿಗಾಗಿ ನೀಡಲಾಗುತ್ತಿದೆ. ಪ್ರಶಸ್ತಿಗಳು ಇಂತಿವೆ: ಸರ್ ಎಂ. ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ, ಡಾ|| ರಾಜಾ ರಾಮಣ್ಣ ರಾಜ್ಯ ಪ್ರಶಸ್ತಿ, ಯುವ ವಿಜ್ಞಾನಿಗಳಿಗೆ ಸರ್ ಸಿ.ವಿ. ರಾಮನ್ ರಾಜ್ಯ ಪ್ರಶಸ್ತಿ, ಯುವ ಇಂಜಿನಿಯರುಗಳಿಗೆ ಪ್ರೊ|| ಸತೀಶ್ ಧವನ್ ಪ್ರಶಸ್ತಿ ಹಾಗೂ ಮಹಿಳಾ ವಿಜ್ಞಾನಿಗಳಿಗೆ ಡಾ|| ಕಲ್ಪನಾ ಚಾವ್ಲಾ ಪ್ರಶಸ್ತಿ.
ರಾಜ್ಯದಲ್ಲಿ ಪ್ರತಿಭಾನ್ವಿತ ಪದವಿ ಪೂರ್ವ ವಿಜ್ಞಾನ ವಿದ್ಯಾರ್ಥಿಗಳನ್ನು ಗುರುತಿಸಿ, ಇವರಲ್ಲಿ ಅನ್ವೇಷಣಾ ಪ್ರವೃತ್ತಿ ಹಾಗೂ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವುದರ ಜೊತೆಗೆ ವಿಜ್ಞಾನದೆಡೆಗಿನ ಅವರ ಆಸಕ್ತಿಯನ್ನು ವೃತ್ತಿ ಜೀವನವಾಗಿ ಪರಿವರ್ತಿಸುವ ನಿಟ್ಟಿನಲ್ಲಿ 2020-21ನೇ ಸಾಲಿನಿಂದ ಹೊಸ ಯೋಜನೆಯಾಗಿ ವಿಜ್ಞಾನ ಪ್ರತಿಭಾ ಶೋಧನೆ ಯೊಜನೆಯನ್ನು ಪ್ರಾರಂಭಿಸಲಾಗಿದೆ. ಪ್ರತಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಟಾಪ್ 10 ವಿದ್ಯಾರ್ಥಿಗಳಂತೆ ಒಟ್ಟು 320 ವಿದ್ಯಾರ್ಥಿಗಳನ್ನು ಅವರು ಪಡೆದ ಎಸ್.ಎಸ್. ಎಲ್.ಸಿ. ಪರೀಕ್ಷೆಯ ಮೆರಿಟ್ ಆಧಾರದ ಮೇಲೆ ಪ್ರಥಮ ವರ್ಷದ ಪಿಯುಸಿ ವಿಜ್ಞಾನ ವಿಭಾಗಕ್ಕೆ ಸರ್ಕಾರಿ ಕಾಲೇಜುಗಳಲ್ಲಿ ದಾಖಲಾದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. 1000/-ಗಳಂತೆ 2 ವರ್ಷದ ಅವಧಿಯಲ್ಲಿ ಒಟ್ಟು 18 ತಿಂಗಳು ಶಿಷ್ಯವೇತನವನ್ನು ನೀಡಲಾಗುತ್ತಿದೆ. ಅಲ್ಲದೇ, ಸದರಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ವಿಜ್ಞಾನ ಶಿಕ್ಷಣವನ್ನು ನೀಡಲಾಗುತ್ತಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಹೊಸ ಸಂಶೋಧನೆಗಳು, ನಮ್ಮ ನಿತ್ಯ ಜೀವನದಲ್ಲಿ ಕಂಡು ಬರುವ, ನಾವು ಬಳಸುವ ಉಪಕರಣಗಳ ಹಿಂದಿರುವ ವೈಜ್ಞಾನಿಕ ಅಂಶಗಳು, ದೇಶದ ವೈಜ್ಞಾನಿಕ ಸಾಧನೆಗಳ ಬಗೆಗಿನ ಅರಿವು ಮತ್ತು ಜನ ಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವ ಉದ್ದೇಶದಿಂದ 2021-22ನೇ ಸಾಲಿನಲ್ಲಿ ಹೊಸ ಯೋಜನೆಯಾಗಿ ವಿಜ್ಞಾನ ಮಾಲಿಕೆ-500 ಎಂಬ ಆಕಾಶವಾಣಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಸದರಿ ಕಾರ್ಯಕ್ರಮವನ್ನು 2021ನೇ ಆಗಸ್ಟ್ 15 ರಿಂದ ‘ನಿತ್ಯ ವಿಜ್ಞಾನ’ ಎಂಬ ಶೀರ್ಷಿಕೆಯಡಿ ಆಕಾಶವಾಣಿ, ಬೆಂಗಳೂರು ಕೇಂದ್ರದ ಸಹಯೋಗದೊಂದಿಗೆ ಸರಣಿ ಕಾರ್ಯಕ್ರಮವಾಗಿ ಬಿತ್ತರಿಸಲಾಗುತ್ತಿದೆ. ಈ ಕಾರ್ಯಕ್ರಮವು ಆಕಾಶವಾಣಿಯ ಎಲ್ಲಾ ಬಾನುಲಿ ಕೇಂದ್ರಗಳಿಂದ ಮತ್ತು ಎಫ್.ಎಂ.ರೇನ್ ಬೋ (101.3 mhz) ಹಾಗೂ ಬೆಂಗಳೂರು ವಿವಿಧ ಭಾರತಿ (102.6 mhz) ಕೇಂದ್ರಗಳಿಂದ ಪ್ರಸಾರ ಮಾಡುತ್ತಿದ್ದು, ಸದರಿ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ವಿಜ್ಞಾನ ಲೇಖಕರು ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಜನ ಸಾಮಾನ್ಯರು ಈ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಿದ್ದು, ಸರಿ ಸುಮಾರು 229 ರೇಡಿಯೋ ಸಂಚಿಕೆಗಳನ್ನು ಯಶಸ್ವಿಯಾಗಿ ಪ್ರಸಾರ ಮಾಡಲಾಗಿದೆ.
ಪ್ರಾದೇಶಿಕ ವಿಜ್ಞಾನ ಕೇಂದ್ರಗಳು
ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರಗಳನ್ನು ಜನಸಾಮಾನ್ಯರಿಗೆ ಪರಿಚಯಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ವೈಚಾರಿಕತೆಗಳನ್ನು ಬೆಳೆಸಲು ಅನುವಾಗುವಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ಹಾಗೂ ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಭಾರತ ಸರ್ಕಾರದ ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಸ್ಥಾಪಿಸಲಾಗಿದ್ದು, ಈ ಎರಡು ಕೇಂದ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಧಾರವಾಡ ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಗಳಿಂದ ಹಲವಾರು ಜನಸಮೂಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ
ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಕರ್ನಾಟಕದ ಮೊದಲ ಪ್ರಾದೇಶಿಕ ವಿಜ್ಞಾನ ಕೇಂದ್ರವಾಗಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ ಫೆಬ್ರವರಿ 2012ರಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈ ವಿಜ್ಞಾನ ಕೇಂದ್ರವನ್ನು 2012ರ ಫೆಬ್ರವರಿ 28 ರಂದು ಲೋಕಾರ್ಪಣೆ ಮಾಡಲಾಗಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸದರಿ ಕೇಂದ್ರವು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ಹಾಗೂ ಉದ್ಯಮಗಳಲ್ಲಿ ಮತ್ತು ಮಾನವ ಕಲ್ಯಾಣದಲ್ಲಿ ಅವುಗಳ ಅನ್ವಯಿಕಗಳನ್ನು ಬಿಂಬಿಸುವ ಮೂಲಕ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಲು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ಜನಪ್ರಿಯಗೊಳಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ.
ಜಾಲತಾಣ: http://dharwadsciencecentre.org/
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯ ಅಂಗಸಂಸ್ಥೆಯಾದ ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್ ಹಾಗೂ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಸಹಯೋಗ ಮತ್ತು ಸಮಾನ ಅನುಪಾತದ ಅನುದಾನದೊಂದಿಗೆ (50 : 50) ಸ್ಥಾಪಿಸಲಾಗಿದೆ. ಈ ಕೇಂದ್ರವು ಮಂಗಳೂರಿನ ಸಮೀಪವಿರುವ ಪಿಲಿಕುಳ ನಿಸರ್ಗಧಾಮದಲ್ಲಿದ್ದು, ಅದರ ಆಡಳಿತವನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸೊಸೈಟಿಯು ನಿರ್ವಹಿಸುತ್ತಿದೆ. ಭಾರತದ ಪ್ರಪ್ರಥಮ 3ಡಿ ತಾರಾಲಯವಾದ ಸ್ವಾಮಿ ವಿವೇಕಾನಂದ ತಾರಾಲಯವನ್ನು ಮಾರ್ಚ್ 1, 2018 ರಂದು ಪಿಲಿಕುಳದ ಆವರಣದಲ್ಲಿ ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ‘ಇನ್ನೋವೇಷನ್ ಹಬ್’ಕೂಡ ಕಾರ್ಯಾರಂಭ ಮಾಡಲಿದೆ. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರವು ತನ್ನ ಹತ್ತು ಹಲವು ಕಾರ್ಯಕ್ರಮಗಳಿಂದ ಶೈಕ್ಷಣಿಕ ಕ್ಷೇತ್ರದ ಗಮನ ಸೆಳೆದಿದೆ. ತನ್ನ ಪರಿಸರ ಸಂಬಂಧಿ ಕಾರ್ಯಕ್ರಮಗಳಿಗಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಶಸ್ತಿ ಪಡೆದಿದೆ.
ಜಾಲತಾಣ: http://www.pilikularsc.com/
ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರಗಳು
ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಸಣ್ಣ ಪ್ರಮಾಣದ ಪ್ರಾದೇಶಿಕ ವಿಜ್ಞಾನ ಕೇಂದ್ರಗಳಾಗಿದ್ದು, ವಿಜ್ಞಾನವನ್ನು ಜನ ಸಾಮಾನ್ಯರೆಡೆಗೆ ಕೊಂಡೊಯ್ದು, ಜನರನ್ನು ವಿಜ್ಞಾನದ ಕಡೆಗೆ ಕರೆದೊಯ್ಯುವ ದೂರದೃಷ್ಠಿಯೊಂದಿಗೆ ಹಾಗೂ ರಾಜ್ಯಾದ್ಯಂತ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳನ್ನು ಪ್ರಚುರಪಡಿಸಲು ರಾಜ್ಯ ಸರ್ಕಾರದ ಸಂಪೂರ್ಣ ಅನುದಾನದೊಂದಿಗೆ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ಹಂತಗಳಲ್ಲಿ ಸ್ಥಾಪಿಸಲಾಗುತ್ತಿದೆ.
ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ಪಟ್ಟಿ.
ಖಗೋಳ ಶಾಸ್ತ್ರ ಸಂಬಂಧಿತ ಶಿಕ್ಷಣದ ಪರಿಕಲ್ಪನೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ನಕ್ಷತ್ರ ಮತ್ತು ಗ್ರಹಗಳನ್ನು ಹೊಂದಿದ ರಾತ್ರಿ ಆಕಾಶದ ನೋಟವನ್ನು ಒಳಾಂಗಣದಲ್ಲಿ ಸೃಷ್ಠಿಸುವಂತಹ ವಿಶೇಷ ಗೋಳ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಪ್ರೊಜೆಕ್ಷನ್ ವ್ಯವಸ್ಥೆಯುಳ್ಳ ತಾರಾಲಯಗಳನ್ನು ರಾಜ್ಯದ ಆಯ್ದ ನಗರಗಳಲ್ಲಿ ಸ್ಥಾಪಿಸಲು ಕ್ರಮಕೈಗೊಳ್ಳಲಾಗುತ್ತಿದೆ.
ಮಂಗಳೂರಿನಲ್ಲಿರುವ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ಅತ್ಯಾಧುನಿಕ ತಾರಾಲಯವನ್ನು ಸ್ಥಾಪಿಸಲಾಗಿದ್ದು, ಮಾರ್ಚ್ 2018 ರಂದು ಉದ್ಘಾಟಿಸಿ, ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಒದಗಿಸಲಾಗಿದೆ. ಬೆಂಗಳೂರಿನ ಜವಾಹರ್‍ಲಾಲ್ ನೆಹರೂ ತಾರಾಲಯವನ್ನು ಸಹ ಆಧುನಿಕ ಆಪ್ಟೋಮೆಕಾನಿಕಲ್ ಮತ್ತು ಡಿಜಿಟಲ್ ಪ್ರೊಜೆಕ್ಷನ್ ವ್ಯವಸ್ಥೆಗಳನ್ನು ಅಳವಡಿಸಿ, ಉನ್ನತೀಕರಿಸಲಾಗಿದ್ದು, ಜನವರಿ 2017 ರಂದು ಉದ್ಘಾಟಿಸಲಾಗಿದೆ. ಪ್ರಸ್ತುತ, ಗದಗ ತಾರಾಲಯದ ಕಟ್ಟಡ ಕಾಮಗಾರಿ ಮುಕ್ತಾಯಗೊಂಡಿದ್ದು, ಸಧ್ಯದಲ್ಲಿಯೇ ಉದ್ಘಾಟನೆಯಾಗಲಿದೆ. ರಾಯಚೂರಿನಲ್ಲಿ ತಾರಾಲಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿವೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನ ಶಿಕ್ಷಣವನ್ನು ಅವರವರ ಶಾಲೆಗಳಗೆ ತೆರಳಿ ಪ್ರದರ್ಶನಗಳನ್ನು ಪ್ರದರ್ಶಿಸುವ ಸಲುವಾಗಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ಸಂಸ್ಥೆಯ ಮೂಲಕ ಸಂಚಾರಿ ಡಿಜಿಟಲ್ ತಾರಾಲಯ ಯೋಜನೆಯನ್ನು 2017 ರಲ್ಲಿ ಪ್ರಾರಂಭಿಸಿ, ಅನುಷ್ಠಾನಗೊಳಿಸಲಾಗುತ್ತಿದೆ. ಸಂಚಾರಿ ಡಿಜಿಟಲ್ ತಾರಾಲಯವು ಅತ್ಯಾಧುನಿಕ ಪ್ರಜೆಕ್ಟರ್ ನ ಸಹಾಯದಿಂದ ವಿಶೇಷ ಗೋಳಾಕಾರದ ಗೊಮ್ಮಟದಲ್ಲಿ ಅದ್ಭುತ ಕಾಲ್ಪನಿಕ ಆಕಾಶವನ್ನು ಸೃಷ್ಠಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ತಾರಾಲಯಗಳು STEAM (Science, Technology, Engineering, Arts and Mathematics) ಗೆ ಸಂಬಂಧಿಸಿದ ಪ್ರದರ್ಶನಗಳನ್ನು ಮನರಂಜನೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರದರ್ಶಿಸುತ್ತವೆ. ಪ್ರತಿ ಪ್ರದರ್ಶನಗಳು ನೈಜತೆಯ ರೂಪದಲ್ಲಿದ್ದು, ವಿಶೇಷ ಅನುಭವಗಳನ್ನು ಮಕ್ಕಳಲ್ಲಿ ಉಂಟುಮಾಡುತ್ತದೆ. ಪ್ರದರ್ಶನಗಳು 25 ರಿಂದ 30 ನಿಮಿಷಗಳಾಗಿದ್ದು, ಒಂದು ಬಾರಿಗೆ 30 ರಿಂದ 40 ವಿದ್ಯಾರ್ಥಿಗಳು ವೀಕ್ಷಿಸಬಹುದಾಗಿದೆ.
ಆರ್ಥಿಕ ವರ್ಷ 2019-20 ರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಿಂದ ಒಟ್ಟು 6 ಸಂಚಾರಿ ಡಿಜಿಟಲ್ ತಾರಾಲಯಗಳನ್ನು ಖರೀದಿಸಲಾಯಿತು. ಸನ್ಮಾನ್ಯ ಮುಖ್ಯಮಂತ್ರಿಗಳು ಈ ಸಂಚಾರಿ ತಾರಾಲಯಗಳನ್ನು ಸೆಪ್ಟೆಂಬರ್ 2019ರ ಮಾಹೆಯಲ್ಲಿ ಉದ್ಘಾಟಿಸಿದರು. 2018-19ನೇ ಸಾಲಿನಲ್ಲಿ ಹನ್ನೊಂದು ಸಂಚಾರಿ ತಾರಾಲಯಗಳು ರಾಜ್ಯದ ವಿವಿಧ ಜಿಲ್ಲೆಗಳ 1,439 ಪ್ರೌಢಶಾಲೆಗಳಿಗೆ ಭೇಟಿ ನೀಡಿ 10,983 ಪ್ರದರ್ಶನಗಳನ್ನು ಏರ್ಪಡಿಸಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಒಟ್ಟು 3,83,043 ಜನರು ಇದರ ಫಲಾನುಭವವನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳು ವಿಜ್ಞಾನವನ್ನು ‘ನೋಡಿ-ಕಲಿ, ಮಾಡಿ-ತಿಳಿ’ ಪರಿಕಲ್ಪನೆಯಡಿ ಅಥೈಸಿಕೊಳ್ಳಲು ನೆರವಾಗುವಂತೆ ಮಿನಿ ವಿಜ್ಞಾನ ಸಂಪನ್ಮೂಲ ಕೇಂದ್ರಗಳನ್ನು ಹಿಂದುಳಿದ ತಾಲ್ಲೂಕುಗಳಾದ ಹೆಚ್.ಡಿ. ಕೋಟೆ, ಕನಕಪುರ, ಕೊಳ್ಳೇಗಾಲ, ಹೊಸದುರ್ಗ, ಕಡೂರು, ಪಾವಗಡ, ಸಿಂಧಗಿ, ಬಿಳಗಿ, ಮಳವಳ್ಳಿ ಹಾಗೂ ಬಿಳಿಗಿರಿರಂಗನಬೆಟ್ಟ ಗಳ ಆಯ್ದ ಪ್ರೌಢಶಾಲೆಗಳಲ್ಲಿ ಸ್ಥಾಪಿಸಲಾಗಿದೆ.
ವಿಜ್ಞಾನ ಗ್ಯಾಲರಿ ಬೆಂಗಳೂರು ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಐರ್ಲೆಂಡ್‍ನ ಡಬ್ಲಿನ್‍ನಲ್ಲಿರುವ ಸೈನ್ಸ್ ಗ್ಯಾಲರಿ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಒಡಂಬಡಿಕೆಯೊಂದಿಗೆ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ ಹಾಗೂ ಸೃಷ್ಠಿ ಕಲಾ, ವಿನ್ಯಾಸ ಮತ್ತು ತಂತ್ರಜ್ಞಾನ ಸಂಸ್ಥೆಗಳ ಶೈಕ್ಷಣಿಕ ಪಾಲುದಾರಿಕೆಗಳೊಂದಿಗೆ ಅನುಷ್ಠಾನಗೊಳಿಸುತ್ತಿರುವ ಒಂದು ಪ್ರಮುಖ ಯೋಜನೆಯಾಗಿದೆ. ಈ ವಿಜ್ಞಾನ ಗ್ಯಾಲರಿಯು ಯುವಕರಿಗೆ ವಿಜ್ಞಾನ, ಕಲೆ ಮತ್ತು ಸಂಸ್ಕೃತಿ ಸಂಗಮಗಳ ಆವಿಷ್ಕಾರಗಳು ಹಾಗೂ ವಿಜ್ಞಾನದಲ್ಲಿನ ನವೀನ ಅವಕಾಶಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಸದರಿ ಗ್ಯಾಲರಿಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಏಪ್ರಿಲ್ 2023 ರೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
Website: https://bengaluru.sciencegallery.com
ಇತ್ತೀಚಿನ ನವೀಕರಣ : 31-10-2022 03:38 PM ಅನುಮೋದಕರು: Admin